
ಮಂಗಳೂರು: ಕೋಟ್ಯಂತರ ರೂಪಾಯಿ ಸಾಲದ ಆಮಿಷವೊಡ್ಡಿ ದೇಶಾದ್ಯಂತದ ಉದ್ಯಮಿಗಳಿಗೆ ಸುಮಾರು ₹200 ಕೋಟಿಗೂ ಅಧಿಕ ಹಣ ವಂಚಿಸಿದ್ದ ಕುಖ್ಯಾತ ವಂಚಕ ರೋಹನ್ ಸಲ್ಡಾನಾನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ತನ್ನ ಐಷಾರಾಮಿ ಜೀವನಶೈಲಿಯನ್ನೇ ಬಂಡವಾಳವಾಗಿಸಿಕೊಂಡು ಈತ ವಂಚನೆ ನಡೆಸುತ್ತಿದ್ದ.
ಜಪ್ಪಿನಮೊಗರುವಿನಲ್ಲಿರುವ ತನ್ನ ಭವ್ಯ ಬಂಗಲೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಪೊಲೀಸರು ರೋಹನ್‌ನನ್ನು ಸೆರೆಹಿಡಿದಿದ್ದಾರೆ. ಈತನ ಬಂಗಲೆಯಲ್ಲಿದ್ದ ಐಷಾರಾಮಿ ಸೌಕರ್ಯಗಳು ಮತ್ತು ವಿದೇಶಿ ಮದ್ಯದ ಸಂಗ್ರಹ ಪೊಲೀಸರನ್ನೇ ಬೆರಗುಗೊಳಿಸಿದೆ.
ವಂಚನೆಯ ಜಾಲ ಹೀಗಿತ್ತು:
ತಾನೊಬ್ಬ ದೊಡ್ಡ ಉದ್ಯಮಿ ಎಂದು ಬಿಂಬಿಸಿಕೊಳ್ಳುತ್ತಿದ್ದ ರೋಹನ್, ಹೊರರಾಜ್ಯ ಮತ್ತು ಹೊರಜಿಲ್ಲೆಗಳ ಶ್ರೀಮಂತ ಉದ್ಯಮಿಗಳನ್ನು ಗುರಿಯಾಗಿಸಿಕೊಂಡಿದ್ದ. ಜಾಗದ ವ್ಯವಹಾರ ಅಥವಾ ಭಾರಿ ಮೊತ್ತದ ಸಾಲ ಕೊಡಿಸುವ ನೆಪದಲ್ಲಿ ಅವರನ್ನು ಸಂಪರ್ಕಿಸಿ ವಿಶ್ವಾಸ ಗಳಿಸುತ್ತಿದ್ದ. ನಂತರ ಅವರನ್ನು ತನ್ನ ಜಪ್ಪಿನಮೊಗರುವಿನ ಅರಮನೆಯಂತಹ ಬಂಗಲೆಗೆ ವ್ಯವಹಾರದ ಮಾತುಕತೆಗೆ ಆಹ್ವಾನಿಸುತ್ತಿದ್ದ.
ಅಲ್ಲಿನ ವೈಭೋಗ, ಕೋಟ್ಯಂತರ ರೂಪಾಯಿ ಮೌಲ್ಯದ ಬಾರ್ ಕೌಂಟರ್, ಲಕ್ಷಾಂತರ ರೂಪಾಯಿ ಮೌಲ್ಯದ ವಿದೇಶಿ ಮದ್ಯದ ಸಂಗ್ರಹ ಮತ್ತು ಆತನ ದುಬಾರಿ ಜೀವನಶೈಲಿಗೆ ಉದ್ಯಮಿಗಳು ಮರುಳಾಗುತ್ತಿದ್ದರು. ₹50 ರಿಂದ ₹100 ಕೋಟಿ ಅಥವಾ ಅದಕ್ಕಿಂತ ದೊಡ್ಡ ಮೊತ್ತದ ಸಾಲ ನೀಡುವುದಾಗಿ ನಂಬಿಸಿ, ಅದಕ್ಕೆ ಪ್ರತಿಯಾಗಿ ₹5 ರಿಂದ ₹10 ಕೋಟಿ ರೂಪಾಯಿವರೆಗೆ ‘ಸ್ಟ್ಯಾಂಪ್ ಡ್ಯೂಟಿ ಶುಲ್ಕ’ವನ್ನು ನಗದು ರೂಪದಲ್ಲಿ ನೀಡುವಂತೆ ಕೇಳುತ್ತಿದ್ದ. ರೋಹನ್ ಮಾತಿಗೆ ಮರುಳಾದ ಉದ್ಯಮಿಗಳು ಯಾವುದೇ ಹಿಂಜರಿಕೆ ಇಲ್ಲದೆ ಕೋಟ್ಯಂತರ ರೂಪಾಯಿ ಹಣವನ್ನು ನೀಡುತ್ತಿದ್ದರು. ತನಗೆ ಬೇಕಾದಷ್ಟು ಹಣ ಸಿಕ್ಕಿದ ಬಳಿಕ, ನಾನಾ ನೆಪಗಳನ್ನು ಹೇಳಿ ಅವರಿಂದ ತಪ್ಪಿಸಿಕೊಳ್ಳುತ್ತಿದ್ದ. ಕಳೆದ ಕೇವಲ 3 ತಿಂಗಳಲ್ಲೇ ಈತ ₹15 ಕೋಟಿ ರೂಪಾಯಿ ವಂಚಿಸಿರುವುದು ತನಿಖೆಯಿಂದ ತಿಳಿದುಬಂದಿದೆ.
ಪೊಲೀಸರನ್ನೇ ಬೆರಗುಗೊಳಿಸಿದ ಬಂಗಲೆಯ ವೈಭೋಗ:
ರೋಹನ್ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು ಆತನ ಐಷಾರಾಮಿ ಜೀವನಶೈಲಿ ಕಂಡು ಬೆಚ್ಚಿಬಿದ್ದಿದ್ದಾರೆ. ಮನೆಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಬಾರ್ ಕೌಂಟರ್, ಅದರಲ್ಲಿ ₹3 ಲಕ್ಷ ಮೌಲ್ಯದ ಸ್ಕಾಚ್ ಸೇರಿದಂತೆ ಶಾಂಪೇನ್, ವೈನ್, ಬಿಯರ್‌ನಂತಹ ತರಹೇವಾರಿ ವಿದೇಶಿ ಮದ್ಯಗಳ ಸಂಗ್ರಹವಿತ್ತು. ಮೂರು ಫ್ರಿಜ್‌ಗಳು ತುಂಬಾ ವಿದೇಶಿ ಬಿಯರ್‌ಗಳಿಂದ ತುಂಬಿದ್ದವು. ಬೆಡ್‌ರೂಂನ ವಾರ್ಡ್‌ರೋಬ್‌ನಲ್ಲಿಯೂ ದುಬಾರಿ ಸ್ಕಾಚ್ ಬಾಟಲಿಗಳು ಪತ್ತೆಯಾಗಿವೆ. ಮನೆಯ ಮುಂಭಾಗದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬೋನ್ಸಾಯಿ ಗಿಡಗಳು ಮತ್ತು ಅತ್ಯಾಧುನಿಕ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.
ಬಾಗಿಲು ಮುರಿದು ‘ಮದ್ಯದ ದೊರೆ’ಯ ಬಂಧನ:
ವಂಚನೆಗೊಳಗಾದ ಉದ್ಯಮಿಯೊಬ್ಬರು ನೀಡಿದ ದೂರಿನನ್ವಯ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಮೋಸ ಹೋದವರು ಹಣ ಕೇಳಲು ಮನೆಗೆ ಬಂದರೆ ಅವರಿಂದ ತಪ್ಪಿಸಿಕೊಳ್ಳಲು ರೋಹನ್ ಮನೆಯೊಳಗೆಯೇ ವಿಶೇಷವಾದ ಅಡಗುತಾಣವನ್ನು ನಿರ್ಮಿಸಿದ್ದ. ಪೊಲೀಸರು ದಾಳಿ ನಡೆಸಿದಾಗ, ರೋಹನ್ ಮಲೇಷಿಯಾದ ಯುವತಿಯೊಬ್ಬಳ ಜೊತೆ ಸ್ಕಾಚ್ ಸೇವಿಸುತ್ತಿದ್ದ. ಪೊಲೀಸರ ಆಗಮನದ ಸುಳಿವು ಸಿಕ್ಕ ಕೂಡಲೇ ಆತ ತನ್ನ ಅಡಗುತಾಣದಲ್ಲಿ ಬಚ್ಚಿಕೊಂಡಿದ್ದ. ಕೊನೆಗೆ ಪೊಲೀಸರು ಬಾಗಿಲನ್ನು ಮುರಿದು ಒಳನುಗ್ಗಿ ‘ಮದ್ಯದ ದೊರೆ’ ಎಂದೇ ಕುಖ್ಯಾತಿ ಪಡೆದಿದ್ದ ರೋಹನ್‌ನನ್ನು ಬಂಧಿಸಿದ್ದಾರೆ.
ಕಂಡವರ ದುಡ್ಡಿನಲ್ಲಿ ಶೋಕಿ ಜೀವನ ನಡೆಸುತ್ತಿದ್ದ ಈ ಮಹಾವಂಚಕ ಸದ್ಯ ಮಂಗಳೂರು ಪೊಲೀಸರ ಅತಿಥಿಯಾಗಿದ್ದು, ವಂಚನಾ ಜಾಲದ ಸಂಪೂರ್ಣ ಆಳ ಮತ್ತು ಇನ್ನಷ್ಟು ಸಂತ್ರಸ್ತರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ.