
ಜೈಪುರ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮಜಲು ಬರೆಯಲಾಗಿದೆ. ಕೇವಲ 14 ವರ್ಷದ ವೈಭವ್ ಸೂರ್ಯವಂಶಿ, ತಮ್ಮ ಚೊಚ್ಚಲ ಐಪಿಎಲ್ ಸೀಸನ್ ನಲ್ಲಿಯೇ ಶತಕ ಸಿಡಿಸಿ, ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ, ವೈಭವ್ ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು. ಈ ಶತಕದೊಂದಿಗೆ ಅವರು ಐಪಿಎಲ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
- ಇದೇ ಪಂದ್ಯದ ಮೂಲಕ ವೈಭವ್ ಸೂರ್ಯವಂಶಿ:
- ಐಪಿಎಲ್ ಇತಿಹಾಸದಲ್ಲಿ ಅತೀ ಕಿರಿಯ ಶತಕದಾತ,
- ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ,
- ಐಪಿಎಲ್‌ನಲ್ಲಿ ಕ್ರಿಸ್ ಗೇಲ್ (30 ಎಸೆತಗಳು) ನಂತರ ಅತೀ ವೇಗವಾಗಿ ಶತಕ ಬಾರಿಸಿದ ಆಟಗಾರ ಎಂಬ ಹಿರಿಮೆಗಳನ್ನೂ ಪಡೆದಿದ್ದಾರೆ.

ಇದಕ್ಕೂ ಮುನ್ನ, ಟಿ20 ಕ್ರಿಕೆಟ್‌ನಲ್ಲಿ ವಿಜಯ್ ಝೋಲ್ ಅವರು ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದರು. ಅವರು 2013ರಲ್ಲಿ 18 ವರ್ಷದ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು. ಇದೀಗ, ವೈಭವ್ ಅವರು ಕೇವಲ 14ರ ಹರೆಯದಲ್ಲಿಯೇ ಈ ದಾಖಲೆಯನ್ನು ಮುರಿದಿದ್ದಾರೆ.
ಅಲ್ಲದೇ, ವೈಭವ್ ಅವರು 15 ವರ್ಷದೊಳಗೆ 20 ಶತಕಗಳನ್ನು ಬಾರಿಸಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ಎಂಬ ಇತಿಹಾಸ ಕೂಡ ರಚಿಸಿದ್ದಾರೆ.
ಇದರಿಂದಾಗಿ, ವೈಭವ್ ಸೂರ್ಯವಂಶಿಯ ಸ್ಪೋಟಕ ಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಗುಜರಾತ್ ಟೈಟಾನ್ಸ್ ನೀಡಿದ್ದ 209 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿ ಭರ್ಜರಿ ಗೆಲುವು ದಾಖಲಿಸಿದೆ.

ವೈಭವ್ ಸೂರ್ಯವಂಶಿಯ ಈ ಸಾಧನೆ, ಕ್ರೀಡಾ ಲೋಕದಲ್ಲಿ ಭಾರೀ ಪ್ರಶಂಸೆಗಳಿಗೆ ಪಾತ್ರವಾಗುತ್ತಿದ್ದು, ಭಾರತ ಕ್ರಿಕೆಟ್ ಭವಿಷ್ಯದಲ್ಲಿ ಹೊಸ ತಾರೆಯ ಉದಯವಾಯಿತು ಎನ್ನಬಹುದು.