
ಚಾಮರಾಜನಗರ: ಯಳಂದೂರು ತಾಲ್ಲೂಕಿನ ಯರಿಯೂರು ಗ್ರಾಮದಲ್ಲಿ ಹಣ್ಣು ಎಂದು ತಿಳಿದು ವಿಷದ ಕಾಯಿ ತಿಂದಿದ್ದರಿಂದ 12 ಮಕ್ಕಳು ಅಸ್ವಸ್ಥಗೊಂಡ ಘಟನೆ ನಡೆದಿದೆ. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭತ್ತ ಕಟಾವು ಮಾಡಲು ಯರಿಯೂರು ಗ್ರಾಮಕ್ಕೆ ಬಂದಿದ್ದ ಕಾರ್ಮಿಕರ ಮಕ್ಕಳು ಈ ದುರ್ಘಟನೆಗೆ ಒಳಗಾಗಿದ್ದಾರೆ. ಆಟವಾಡುತ್ತಿದ್ದಾಗ, ಹಣ್ಣು ಎಂದು ತಿಳಿದು ‘ಮರಳೆಕಾಯಿ’ ಎಂಬ ವಿಷದ ಕಾಯಿಯನ್ನು ತಿಂದಿದ್ದಾರೆ. ಸ್ವಲ್ಪ ಸಮಯದ ನಂತರ ಮಕ್ಕಳಿಗೆ ವಾಂತಿ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿದೆ. ಇದರಿಂದ ಗಾಬರಿಯಾದ ಪೋಷಕರು ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಪ್ರಥಮವಾಗಿ ಯಳಂದೂರು ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಆದರೆ, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ಎಲ್ಲಾ ಮಕ್ಕಳನ್ನು ಚಾಮರಾಜನಗರದ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಕ್ಕಳಿಗೆ ಚಿಕಿತ್ಸೆ ಮುಂದುವರಿದಿದೆ.