
ಉಡುಪಿ: ಐಸಿಎಐ (ICAI) ಹೊಸ ದೆಹಲಿಯು ಮೇ ತಿಂಗಳಲ್ಲಿ ನಡೆಸಿದ ಸಿಎ (ಚಾರ್ಟರ್ಡ್ ಅಕೌಂಟೆಂಟ್) ಅಂತಿಮ ಪರೀಕ್ಷೆಯಲ್ಲಿ ಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ 10 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ.
ಇದು ಕಾಲೇಜಿನ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ. ಕಳೆದ ಏಳು ವರ್ಷಗಳಲ್ಲಿ, ಈ ಕಾಲೇಜಿನಿಂದ ಒಟ್ಟು 94 ವಿದ್ಯಾರ್ಥಿಗಳು ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಇದು ಕಾಲೇಜಿನ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.
59 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು, ವಿದ್ಯಾರ್ಥಿಗಳಿಗೆ ವಿಶಿಷ್ಟ ಕಲಿಕಾ ವಾತಾವರಣವನ್ನು ಒದಗಿಸುತ್ತದೆ. ಇಲ್ಲಿ ವಿದ್ಯಾರ್ಥಿಗಳು ಬೆಳಗಿನ ಸಮಯದಲ್ಲಿ ಸಿಎ ಫೌಂಡೇಶನ್ ಮತ್ತು ಇಂಟರ್‌ಮೀಡಿಯೇಟ್ ಪರೀಕ್ಷೆಗಳಿಗೆ ತರಬೇತಿ ಪಡೆದರೆ, ಸಂಜೆ ಬಿ.ಕಾಂ ಪದವಿಯನ್ನು ಅಭ್ಯಸಿಸುತ್ತಾರೆ. ಈ ದ್ವಿಮುಖ ಕಲಿಕಾ ವ್ಯವಸ್ಥೆಯು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ವೃತ್ತಿಪರ ಜ್ಞಾನವನ್ನು ಸಮರ್ಥವಾಗಿ ಪಡೆಯಲು ಸಹಕಾರಿಯಾಗಿದೆ.