
1977ರಲ್ಲಿ ಉಡಾವಣೆಗೊಂಡಿದ್ದ ನಾಸಾದ ವೊಯೇಜರ್ 1 ಬಾಹ್ಯಾಕಾಶ ನೌಕೆ, ದಶಕಗಳ ಕಾಲ ಬಾಹ್ಯಾಕಾಶದಲ್ಲಿ ತನ್ನ ಪ್ರಯಾಣವನ್ನು ನಡೆಸುತ್ತಾ ಬಂದಿತ್ತು. ಆದರೆ, ಅಕ್ಟೋಬರ್ 16, 2024ರಂದು ನಡೆದ ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ, ವೊಯೇಜರ್ 1 ಬಾಹ್ಯಾಕಾಶ ನೌಕೆ ಇದ್ದಕ್ಕಿದ್ದಂತೆ ತನ್ನ ಪ್ರಮುಖ ಎಕ್ಸ್ ಬ್ಯಾಂಡ್ ರೇಡಿಯೋ ಟ್ರಾನ್ಸ್‌ಮಿಟರ್ ಅನ್ನು ಸ್ಥಗಿತಗೊಳಿಸಿ, ಹೆಚ್ಚುವರಿಯಾದ ಎಸ್ ಬ್ಯಾಂಡ್ ಟ್ರಾನ್ಸ್‌ಮಿಟರನ್ನು ಚಾಲ್ತಿಗೊಳಿಸಿತು. ಈ ಎಸ್ ಬ್ಯಾಂಡ್ ಟ್ರಾನ್ಸ್‌ಮಿಟರನ್ನು 1981ರ ಬಳಿಕ ಇದೇ ಮೊದಲ ವೊಯೇಜರ್ 1 ಬಳಸಿದೆ.
ಎಸ್ ಬ್ಯಾಂಡ್ ಟ್ರಾನ್ಸ್‌ಮಿಟರ್ ಕಡಿಮೆ ಫ್ರೀಕ್ವೆನ್ಸಿಯಲ್ಲಿ (ಆವರ್ತನ) ಕಾರ್ಯಾಚರಿಸುವುದರಿಂದ, ಅದರ ಸಂಕೇತಗಳು ದುರ್ಬಲವಾಗಿರುತ್ತವೆ. ಇದರಿಂದಾಗಿ, ವೊಯೇಜರ್ 1 ಬಾಹ್ಯಾಕಾಶ ನೌಕೆಗೆ ಭೂಮಿಯೊಡನೆ ಸಂಪರ್ಕದಲ್ಲಿರುವುದು ಕಷ್ಟಕರವಾಗಿದೆ. ವೊಯೇಜರ್ 1 ಬಾಹ್ಯಾಕಾಶ ನೌಕೆ ಈಗ 25 ಬಿಲಿಯನ್ ಕಿಲೋಮೀಟರ್ ದೂರದಲ್ಲಿರುವುದರಿಂದ, ನಾಸಾದ ಡೀಪ್ ಸ್ಪೇಸ್ ನೆಟ್‌ವರ್ಕ್‌ಗೆ (ಡಿಎನ್ಎಸ್) ಅದರೊಡನೆ ಸಂಪರ್ಕವನ್ನು ಮರಳಿ ಸ್ಥಾಪಿಸುವುದು ದುಸ್ತರವಾಗಿದೆ.