
ತೊಕ್ಕೊಟ್ಟು ಮಾಣಿ ರಾಜ್ಯ ಹೆದ್ದಾರಿಯ ತೊಕ್ಕೊಟ್ಟಿನಿಂದ ಚೆಂಬುಗುಡ್ಡೆವರೆಗೆ ಮತ್ತು ಮುಡಿಪುವರೆಗಿನ ರಸ್ತೆಗಳ ಗುಂಡಿಗೆ ತಾತ್ಕಾಲಿಕ ತೇಪೆ ಹಾಕುವ ಕಾಮಗಾರಿ ಆರಂಭಗೊಂಡಿದೆ. ಕಳೆದ ಎರಡು ತಿಂಗಳಿನಿಂದ ರಸ್ತೆ ಹೊಂಡದಿಂದ ವಾಹನ ಸಂಚಾರಕ್ಕೆ ತಡೆಯಾಗುವುದರೊಂದಿಗೆ ವಿವಿಧ ಸಂಘಟನೆಗಳ ಪ್ರತಿಭಟನೆಯ ನಡುವೆಯೂ ಇಲಾಖೆ ಎಚ್ಚೆತ್ತು ಕೊಂಡಿರಲ್ಲಿಲ್ಲ. ಚೆಂಬುಗುಡ್ಡೆಯಲ್ಲಿ ನಡೆದ ಸ್ಕೂಟರ್ ಅಪಘಾತದಲ್ಲಿ ಮಹಿಳೆ ಮೃತಪಟ್ಟ ಅನಂತರ ಏಕಾಏಕಿ ಮರು ದಿನವೇ ರಸ್ತೆಗಳ ಹೊಂಡ ತುಂಬಿಸುವ ಕಾರ್ಯ ಮತ್ತು ತಾತ್ಕಾಲಿಕವಾಗಿ ಡಾಮರು ಹಾಕುವ ಕಾರ್ಯ ಆರಂಭಗೊಂಡಿದೆ.
ರಾಜ್ಯ ಹೆದ್ದಾರಿ ತೊಕ್ಕೊಟ್ಟಿನಿಂದ ಮುಡಿಪುವರೆಗಿನ ಚತುಷ್ಪಥ ರಸ್ತೆ ಕಾಮಗಾರಿ ಶೇ. 80 ಪೂರ್ಣಗೊಂಡಿದೆ. ತೊಕ್ಕೊಟ್ಟಿನಿಂದ ಚೆಂಬುಗುಡ್ಡೆವರೆಗಿನ ಕಾಮಗಾರಿ ಮತ್ತು ಅಸೈಗೋಳಿಯಿಂದ ಮಂಗಳೂರು ವಿ.ವಿ.ವರೆಗಿನ ದ್ವಿಪಥ ರಸ್ತೆ ಕಾಮಗಾರಿಗೆ 25 ಕೋಟಿ ರೂ. ಅನುದಾನ ಬಿಡುಗಡೆಯಾಗಿ ಟೆಂಡರು ಪ್ರಕ್ರಿಯೆ ಮುಗಿದು ಚೆಂಬುಗುಡ್ಡೆಯಿಂದ ತೊಕ್ಕೊಟ್ಟುವರೆಗಿನ ಕಾಮಗಾರಿಯ ಪ್ರಾರಂಭದ ಹಂತದ ಕಾಮಗಾರಿ ಆರಂಭ ಗೊಂಡಿದೆ. ನ. 24ರ ಅನಂತರ ವಿದ್ಯುಕ್ತ ವಾಗಿ ಶಂಕುಸ್ಥಾಪನೆಯಾಗಲಿದ್ದು, ಬಳಿಕ ಕಾಮಗಾರಿ ವೇಗ ಪಡೆದು ಕೊಳ್ಳಲಿದೆ.