
ಪ್ರತಿ ವರ್ಷ ಮಾರ್ಚ್ 30 ರಂದು ವಿಶ್ವ ಇಡ್ಲಿ ದಿನವನ್ನು ಆಚರಿಸುವ ಮೂಲಕ ಈ ಪೌಷ್ಟಿಕ ಹಾಗೂ ರುಚಿಕರವಾದ ದಕ್ಷಿಣ ಭಾರತದ ಸಾಂಪ್ರದಾಯಿಕ ಆಹಾರಕ್ಕೆ ಜಾಗತಿಕ ಮನ್ನಣೆ ನೀಡಲಾಗುತ್ತದೆ.
ಈ ದಿನದ ಮಹತ್ವವೇನು?
ಇಡ್ಲಿ ಕೇವಲ ಒಂದು ತಿಂಡಿಯಲ್ಲ, ಅದು ಸಮತೋಲಿತ ಆಹಾರದ ಸಂಕೇತ. ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ನೆನೆಸಿ, ರುಬ್ಬಿ, ಹುದುಗು ಭರಿಸಿದ (Fermentation) ನಂತರ ಹಬೆಯಲ್ಲಿ ಬೇಯಿಸುವ ಈ ವಿಧಾನವು ಜೀರ್ಣಕ್ರಿಯೆಗೆ ಅತ್ಯುತ್ತಮವಾಗಿದೆ. ಇದರಲ್ಲಿ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳ ಸಮಿಶ್ರಣವಿದ್ದು, ಯಾವುದೇ ಎಣ್ಣೆಯ ಅಂಶವಿಲ್ಲದೆ ತಯಾರಾಗುವುದರಿಂದ ಆರೋಗ್ಯ ಪ್ರೇಮಿಗಳ ಮೊದಲ ಆಯ್ಕೆಯಾಗಿದೆ.
ಮಾರ್ಚ್ 30 ರಂದೇ ಏಕೆ ಆಚರಿಸಲಾಗುತ್ತದೆ?
ವಿಶ್ವ ಇಡ್ಲಿ ದಿನದ ಆಚರಣೆಯು 2015 ರಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ಪ್ರಾರಂಭವಾಯಿತು. ಚೆನ್ನೈನ ಪ್ರಸಿದ್ಧ ಇಡ್ಲಿ ತಯಾರಕರಾದ ಎನಿವನ್ ಇನಿಯವನ್ ಅವರು ಈ ದಿನದ ಹಿಂದಿನ ಪ್ರಮುಖ ರೂವಾರಿ. ಅವರು ಮಾರ್ಚ್ 30 ರಂದು ಬೃಹತ್ ಗಾತ್ರದ ಸುಮಾರು 1320 ಕೆಜಿ ತೂಕದ ಇಡ್ಲಿಯನ್ನು ತಯಾರಿಸಿ ಪ್ರದರ್ಶಿಸುವ ಮೂಲಕ ಈ ದಿನವನ್ನು ಅಧಿಕೃತವಾಗಿ ಆಚರಿಸಲು ನಾಂದಿ ಹಾಡಿದರು. ಅಂದಿನಿಂದ, ಇಡ್ಲಿಯ ಜನಪ್ರಿಯತೆಯನ್ನು ಹೆಚ್ಚಿಸಲು ಪ್ರತಿ ವರ್ಷ ಇದೇ ದಿನಾಂಕದಂದು ವಿಶ್ವದಾದ್ಯಂತ ಇಡ್ಲಿ ಪ್ರೇಮಿಗಳು ಸಂಭ್ರಮಿಸುತ್ತಾರೆ.













