
ಕುಂಬಳೆ: ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ನಡೆದ ಯುವ ನ್ಯಾಯವಾದಿ ರಂಜಿತಾ ಕುಮಾರಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಬತ್ತೇರಿ ನಿವಾಸಿಯಾಗಿದ್ದ ಮತ್ತು ಸಿಪಿಎಂ ಕುಂಬಳೆ ಸ್ಥಳೀಯ ಸಮಿತಿಯ ಸದಸ್ಯೆಯೂ ಆಗಿದ್ದ ರಂಜಿತಾ ಕುಮಾರಿ (27) ಅವರು ಸೆಪ್ಟೆಂಬರ್ 30 ರಂದು ತಮ್ಮ ಕಚೇರಿಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಈ ದುರ್ಘಟನೆಯ ನಂತರ ನಾಪತ್ತೆಯಾಗಿದ್ದ ಕುಂಬಳೆ ಮೂಲದ ಇನ್ನೋರ್ವ ನ್ಯಾಯವಾದಿಯನ್ನು ಪೊಲೀಸರು ತಿರುವನಂತಪುರಂನಲ್ಲಿ ವಶಕ್ಕೆ ಪಡೆದಿದ್ದಾರೆ. ಈ ಯುವ ವಕೀಲರು ರಂಜಿತಾ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಮೃತ ರಂಜಿತಾ ಕುಮಾರಿ ಅವರು ಸಾವಿಗೂ ಮುನ್ನ ಬರೆದಿಟ್ಟಿದ್ದ ಡೆತ್ ನೋಟ್ ಮತ್ತು ಅವರ ಮೊಬೈಲ್‌ನಲ್ಲಿದ್ದ ಮಾಹಿತಿಗಳನ್ನು ಆಧರಿಸಿ ಕುಂಬಳೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದರು. ಈ ತನಿಖೆಯ ಭಾಗವಾಗಿ ನಾಪತ್ತೆಯಾಗಿದ್ದ ವಕೀಲರನ್ನು ರಾಜಧಾನಿ ತಿರುವನಂತಪುರಂನಿಂದ ವಶಕ್ಕೆ ಪಡೆಯಲು ಪೊಲೀಸರು ಯಶಸ್ವಿಯಾಗಿದ್ದಾರೆ.
ಸದ್ಯ ವಶಕ್ಕೆ ಪಡೆದಿರುವ ನ್ಯಾಯವಾದಿಯನ್ನು ಸಮಗ್ರವಾಗಿ ವಿಚಾರಣೆಗೊಳಪಡಿಸಲಾಗುವುದು ಎಂದು ಪೊಲೀಸರು ದೃಢಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ತನಿಖೆಯ ನಂತರ ಹೊರಬೀಳುವ ಸಾಧ್ಯತೆ ಇದೆ. ಯುವ ನ್ಯಾಯವಾದಿಯ ಅಕಾಲಿಕ ಸಾವು ಕುಂಬಳೆ ಪಟ್ಟಣದಲ್ಲಿ ಆತಂಕವನ್ನು ಮೂಡಿಸಿದೆ.