
ಹೈದರಾಬಾದ್: ನಟಿ ಮೃಣಾಲ್ ಠಾಕೂರ್ ಮತ್ತು ನಟ ಧನುಷ್ ನಡುವಿನ ಸಂಬಂಧದ ಬಗ್ಗೆ ಕಳೆದ ಕೆಲವು ದಿನಗಳಿಂದ ಗಾಸಿಪ್‌ಗಳು ಹರಿದಾಡುತ್ತಿದ್ದವು. ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರು ಒಟ್ಟಾಗಿ ಕಾಣಿಸಿಕೊಂಡ ವಿಡಿಯೋಗಳು ಮತ್ತು ಫೋಟೋಗಳು ಈ ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡಿದ್ದವು. ಇದೀಗ ‘ಸೀತಾ ರಾಮಂ’ ಖ್ಯಾತಿಯ ನಟಿ ಮೃಣಾಲ್ ಠಾಕೂರ್ ಸ್ವತಃ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಈ ವದಂತಿಗಳ ಮೂಲ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದಾಗಿತ್ತು. ಅಜಯ್ ದೇವಗನ್ ಅವರ ಮುಂಬರುವ ಸಿನಿಮಾ ‘ಸನ್ ಆಫ್ ಸರ್ದಾರ್ 2’ರ ವಿಶೇಷ ಪ್ರದರ್ಶನಕ್ಕೆ ತಮಿಳು ನಟ ಧನುಷ್ ಚೆನ್ನೈನಿಂದ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಮೃಣಾಲ್ ಮತ್ತು ಧನುಷ್ ಆಪ್ತವಾಗಿ ಮಾತನಾಡುತ್ತಾ, ಕೈ ಹಿಡಿದುಕೊಂಡಿರುವ ವಿಡಿಯೋಗಳು ವೈರಲ್ ಆಗಿದ್ದವು. ಇದಲ್ಲದೆ, ಮೃಣಾಲ್ ಅವರು ಧನುಷ್ ಅವರ ಸಹೋದರಿಯರನ್ನು ಇನ್ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡಿದ್ದು, ಈ ಸಂಬಂಧದ ಕುರಿತು ಇನ್ನಷ್ಟು ಊಹಾಪೋಹಗಳನ್ನು ಹುಟ್ಟುಹಾಕಿತ್ತು.
ಆದರೆ, ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಮೃಣಾಲ್, “ಧನುಷ್ ಅವರು ನನಗೆ ಒಬ್ಬ ಉತ್ತಮ ಸ್ನೇಹಿತರು ಅಷ್ಟೇ” ಎಂದು ನಕ್ಕಿದ್ದಾರೆ. ಈ ವದಂತಿಗಳು ತಮಾಷೆಯಾಗಿವೆ ಎಂದು ಅವರು ಹೇಳಿದ್ದಾರೆ.
ಮೃಣಾಲ್ ಠಾಕೂರ್ ಅವರು, “ಧನುಷ್ ‘ಸನ್ ಆಫ್ ಸರ್ದಾರ್ 2’ ಕಾರ್ಯಕ್ರಮಕ್ಕೆ ಬಂದಿದ್ದು ನಿಜ. ಆದರೆ, ಅದನ್ನು ತಪ್ಪು ಎಂದು ತಿಳಿಯಬಾರದು. ಅವರನ್ನು ಆಮಂತ್ರಿಸಿದ್ದು ಅಜಯ್ ದೇವಗನ್,” ಎಂದು ಸ್ಪಷ್ಟಪಡಿಸುವ ಮೂಲಕ ಎಲ್ಲಾ ಗಾಸಿಪ್‌ಗಳಿಗೆ ಪೂರ್ಣ ವಿರಾಮ ಇಟ್ಟಿದ್ದಾರೆ.
ಈ ಹಿಂದೆ, ಧನುಷ್ 2022ರಲ್ಲಿ ತಮ್ಮ ಪತ್ನಿ ಐಶ್ವರ್ಯಾ ರಜನಿಕಾಂತ್ ಅವರಿಂದ ದೂರವಾದರು ಮತ್ತು 2024ರ ನವೆಂಬರ್‌ನಲ್ಲಿ ಇಬ್ಬರು ಅಧಿಕೃತವಾಗಿ ವಿಚ್ಛೇದನ ಪಡೆದಿದ್ದರು. ಈ ಬೆಳವಣಿಗೆಗಳ ನಂತರ, ಮೃಣಾಲ್ ಜೊತೆಗಿನ ಧನುಷ್ ಅವರ ಆಪ್ತತೆಯ ಬಗ್ಗೆ ಹೆಚ್ಚು ಗಮನ ಸೆಳೆದಿತ್ತು. ಆದರೆ, ಮೃಣಾಲ್ ಅವರ ಸ್ಪಷ್ಟೀಕರಣದೊಂದಿಗೆ ಈ ವದಂತಿಗಳಿಗೆ ತೆರೆ ಬಿದ್ದಿದೆ.