
ಹೈದರಾಬಾದ್: ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಖ್ಯಾತ ನಟ ರಾಣಾ ದಗ್ಗುಬಾಟಿ ಸೋಮವಾರ ಜಾರಿ ನಿರ್ದೇಶನಾಲಯ (ED) ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಈ ಮಹತ್ವದ ಬೆಳವಣಿಗೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟರಾದ ವಿಜಯ್ ದೇವರಕೊಂಡ ಆಗಸ್ಟ್ 6 ರಂದು ಮತ್ತು ಪ್ರಕಾಶ್ ರಾಜ್ ಜುಲೈ 30 ರಂದು ವಿಚಾರಣೆ ಎದುರಿಸಿದ್ದರು. ಈ ತನಿಖೆಯ ಜಾಲ ಇದೀಗ ರಾಣಾ ಅವರನ್ನೂ ಸುತ್ತಿಕೊಂಡಿದೆ.
ನಟರು ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಬೆಟ್ಟಿಂಗ್ ಆಪ್‌ಗಳನ್ನು ಪ್ರಚಾರ ಮಾಡಿರುವುದು ಈ ಪ್ರಕರಣದ ಕೇಂದ್ರಬಿಂದುವಾಗಿದೆ. ದೇಶದ 5 ರಾಜ್ಯಗಳಲ್ಲಿ ಈ ಸಂಬಂಧ ದಾಖಲಾಗಿರುವ ಎಫ್‌ಐಆರ್‌ಗಳ ಆಧಾರದ ಮೇಲೆ ED ತನಿಖೆ ನಡೆಸುತ್ತಿದೆ. ಈ ಆಪ್‌ಗಳ ಮೂಲಕ ಕೋಟ್ಯಂತರ ರೂಪಾಯಿ ಅಕ್ರಮ ಹಣವನ್ನು ಗಳಿಸಿ, ಅದನ್ನು ಕಾನೂನುಬಾಹಿರವಾಗಿ ವರ್ಗಾಯಿಸಲಾಗಿದೆ ಎಂಬ ಗಂಭೀರ ಆರೋಪವಿದೆ.
ಇದೇ ಪ್ರಕರಣದಲ್ಲಿ ನಟಿ ಲಕ್ಷ್ಮಿ ಮಂಚು ಅವರಿಗೂ ವಿಚಾರಣೆಗೆ ಹಾಜರಾಗುವಂತೆ ED ನೋಟಿಸ್ ಜಾರಿ ಮಾಡಿದೆ. ಇದರೊಂದಿಗೆ ನಟಿಯರಾದ ನಿಧಿ ಅಗರ್ವಾಲ್, ಪ್ರಣೀತಾ ಸುಭಾಶ್, ಅನನ್ಯಾ ನಾಗಲ್ಲಾ ಮತ್ತು ಟಿ.ವಿ. ನಿರೂಪಕಿ ಶ್ರೀಮುಖಿ ಅವರ ಹೆಸರುಗಳೂ ತನಿಖೆಯ ವ್ಯಾಪ್ತಿಯಲ್ಲಿ ಕೇಳಿಬಂದಿರುವುದು ಚಿತ್ರರಂಗದ ತಾರೆಯರಲ್ಲಿ ಆತಂಕ ಮೂಡಿಸಿದೆ. ತನಿಖಾ ಸಂಸ್ಥೆ ಈಗಾಗಲೇ 29 ಮಂದಿ ಸೆಲೆಬ್ರಿಟಿಗಳಿಗೆ ಸಮನ್ಸ್ ಜಾರಿ ಮಾಡಿದೆ. ಭವಿಷ್ಯದಲ್ಲಿ ಈ ಪ್ರಕರಣದ ತನಿಖೆ ಮತ್ತಷ್ಟು ವ್ಯಾಪಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.