
ಬೆಂಗಳೂರು: ಚಿತ್ರರಂಗದ ವರ್ಣರಂಜಿತ ಲೋಕಕ್ಕೆ ಮಾರುಹೋಗಿ, ಸುಭದ್ರವಾಗಿದ್ದ ಉದ್ಯಮವನ್ನು ಅರ್ಧಕ್ಕೆ ಕೈಬಿಟ್ಟ ಸ್ಯಾಂಡಲ್‌ವುಡ್ ನಟ ಗಣೇಶ್ ಅವರ ಸಹೋದರ ಮಹೇಶ್, ಈಗ ತಮ್ಮ ಹಳೆಯ ನಿರ್ಧಾರದ ಬಗ್ಗೆ ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.
ಉದ್ಯಮ ಬಿಟ್ಟು ಬಣ್ಣದ ಲೋಕಕ್ಕೆ:
ಕನ್ನಡ ಚಿತ್ರರಂಗದ ಯಶಸ್ವಿ ನಟ ಗಣೇಶ್ ಅವರಿಗೆ ಸಿನಿಮಾರಂಗದ ಏರಿಳಿತಗಳ ಬಗ್ಗೆ ಸ್ಪಷ್ಟ ಅರಿವಿತ್ತು. ಇದೇ ಕಾರಣಕ್ಕೆ ಅವರು ತಮ್ಮ ತಮ್ಮ ಮಹೇಶ್ ಅವರಿಗೆ ಸುರಕ್ಷಿತ ಭವಿಷ್ಯ ರೂಪಿಸಿಕೊಡುವ ಉದ್ದೇಶದಿಂದ MTR ಸಂಸ್ಥೆಯ ಹೋಲ್‌ಸೇಲ್ ಡಿಸ್ಟ್ರಿಬ್ಯೂಷನ್ ವ್ಯವಹಾರವನ್ನು ಆರಂಭಿಸಿಕೊಟ್ಟಿದ್ದರು. ವಾರ್ಷಿಕ ಸುಮಾರು 4 ರಿಂದ 5 ಕೋಟಿ ರೂಪಾಯಿಗಳ ಬೃಹತ್ ವಹಿವಾಟು ನಡೆಸುತ್ತಿದ್ದ ಈ ಉದ್ಯಮದಲ್ಲಿ ಮಹೇಶ್ ಉತ್ತಮವಾಗಿ ನೆಲೆ ಕಂಡುಕೊಂಡಿದ್ದರು. ಆದರೆ, ಗೆಳೆಯರ ಒತ್ತಾಯ ಹಾಗೂ ನಾಯಕ ನಟನಾಗಬೇಕೆಂಬ ಹಂಬಲದಿಂದಾಗಿ, ಅಣ್ಣ ಹಾಕಿಕೊಟ್ಟ ಭದ್ರ ಬುನಾದಿಯನ್ನು ಬದಿಗಿಟ್ಟು ಮಹೇಶ್ ಕ್ಯಾಮೆರಾ ಮುಂದೆ ನಿಂತರು.
ಸಿನಿಮಾ ಜರ್ನಿ ಮತ್ತು ಸೋಲು:
‘ನಮಕ್‌ಹರಾಮ್’ ಎಂಬ ಚಿತ್ರದ ಮೂಲಕ ಹೀರೊ ಆಗಿ ಎಂಟ್ರಿ ಕೊಟ್ಟ ಮಹೇಶ್ ಅವರಿಗೆ ಅದೃಷ್ಟ ಕೈಹಿಡಿಯಲಿಲ್ಲ. ತದನಂತರ ಒಂದೆರಡು ಸಿನಿಮಾಗಳಲ್ಲಿ ನಟಿಸಿದರೂ ಪ್ರೇಕ್ಷಕರ ಮನಗೆಲ್ಲಲು ಸಾಧ್ಯವಾಗಲಿಲ್ಲ. ಇದೇ ಹಾದಿಯಲ್ಲಿ ಗಣೇಶ್ ಅವರ ಮತ್ತೊಬ್ಬ ಸಹೋದರ ಸೂರಜ್ ಕೃಷ್ಣ ಕೂಡ ‘ನಾನೇ ರಾಜ’ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದು ವಿಫಲರಾದರು. ಸದ್ಯ ಸೂರಜ್ ಚಿತ್ರರಂಗದಿಂದ ದೂರವಾಗಿ ನೆಲಮಂಗಲದ ಅಡಕಮಾರನಹಳ್ಳಿಯಲ್ಲಿ ಅಣಬೆ ಕೃಷಿ ಮತ್ತು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ.
‘ಮಗ್ಗಿ ಪುಸ್ತಕ’ದ ಮೇಲೆ ಹೊಸ ಭರವಸೆ:
ತಮ್ಮ ಹಳೆಯ ತಪ್ಪುಗಳನ್ನು ಒಪ್ಪಿಕೊಂಡಿರುವ ಮಹೇಶ್, “ಅಂದು ಅಣ್ಣನ ಮಾತು ಕೇಳಿದ್ದರೆ ಇಂದು ಪರಿಸ್ಥಿತಿ ಬೇರೆಯೇ ಇರುತ್ತಿತ್ತು” ಎಂದು ಭಾವುಕರಾಗಿ ನುಡಿದಿದ್ದಾರೆ. ಸದ್ಯ ಬಿಡುಗಡೆಯಾಗಿರುವ ‘ಮಗ್ಗಿ ಪುಸ್ತಕ’ ಸಿನಿಮಾದಲ್ಲಿ ಅವರು ಖಳನಾಯಕನ (Negative Role) ಪಾತ್ರ ನಿರ್ವಹಿಸಿದ್ದಾರೆ. ಎಚ್. ಸಿ. ಮಹೇಶ್ ಅವರ ‘ಅವನಿ’ ಕಾದಂಬರಿ ಆಧರಿತ ಈ ಚಿತ್ರದಲ್ಲಿ ರಂಗಾಯಣ ರಘು ಅವರಂತಹ ಹಿರಿಯ ಕಲಾವಿದರ ಜೊತೆ ನಟಿಸಿರುವ ಮಹೇಶ್, ಈ ಬಾರಿಯಾದರೂ ಸಿನಿಮಾ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆಯೂರುವ ವಿಶ್ವಾಸದಲ್ಲಿದ್ದಾರೆ.



































