
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಟಿ ರನ್ಯಾ ರಾವ್ (Ranya Rao) ಅವರನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ದುಬೈನಿಂದ ಬೆಂಗಳೂರಿಗೆ ವಾಪಸಾದ ನಟಿ ಅವರು ಹೆಚ್ಚುವರಿ ಚಿನ್ನವನ್ನು ಅಕ್ರಮವಾಗಿ ಸಾಗಿಸಿದ ಆರೋಪದಲ್ಲಿ ವಿಚಾರಣೆಗೆ ಒಳಪಡುತ್ತಿದ್ದಾರೆ.
ಸೋಮವಾರ (ಮಾರ್ಚ್ 3) ರಂದು ರನ್ಯಾ ರಾವ್ ದುಬೈನಿಂದ ಬೆಂಗಳೂರಿಗೆ ಬಂದಿದ್ದರು. ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಅವರ ಬ್ಯಾಗ್ ಪರಿಶೀಲಿಸಿದಾಗ, ಹೆಚ್ಚುವರಿ ಚಿನ್ನವನ್ನು ಸಾಗಿಸಿದ್ದು ಪತ್ತೆಯಾಗಿದೆ. ಇದು ಸುಮಾರು 14 ಕಿಲೋಗ್ರಾಂ ಚಿನ್ನವಾಗಿದ್ದು, ಇದರ ಮೌಲ್ಯ ಸುಮಾರು 12 ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿದೆ.
ರನ್ಯಾ ರಾವ್ ಅವರು ಐಪಿಎಸ್ ಅಧಿಕಾರಿಯೊಬ್ಬರ ಮಲಮಗಳು ಎಂದು ತಿಳಿದುಬಂದಿದೆ. ಸದ್ಯ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಸಂಬಂಧವಾಗಿ ಕಸ್ಟಮ್ಸ್ ಇಲಾಖೆಯು ವಿವರಗಳನ್ನು ಪರಿಶೀಲಿಸುತ್ತಿದೆ ಎಂದು ತಿಳಿದುಬಂದಿದೆ.
ಸಿನಿಮಾರಂಗದಲ್ಲಿ ರನ್ಯಾ ರಾವ್
ರನ್ಯಾ ರಾವ್ ಮೂಲತಃ ಚಿಕ್ಕಮಗಳೂರಿನವರು. ಅವರು 2014ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಸುದೀಪ್ ಅಭಿನಯದ ‘ಮಾಣಿಕ್ಯ’ ಚಿತ್ರದ ಮೂಲಕ ಅವರು ಕನ್ನಡ ಸಿನಿಮಾ ಉದ್ಯಮಕ್ಕೆ ಪರಿಚಿತರಾದರು. ಈ ಚಿತ್ರದಲ್ಲಿ ಅವರು ‘ಮಾನಸ’ ಪಾತ್ರವನ್ನು ನಿರ್ವಹಿಸಿದ್ದರು. ನಂತರ, ಗಣೇಶ್ ಅಭಿನಯದ ‘ಪಟಾಕಿ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.
ಕನ್ನಡದ ಜೊತೆಗೆ, ರನ್ಯಾ ತಮಿಳು ಸಿನಿಮಾರಂಗದಲ್ಲೂ ಕೆಲಸ ಮಾಡಿದ್ದಾರೆ. ‘ನೋ ಎಂಟ್ರಿ’ ಎಂಬ ತಮಿಳು ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು.