
ಅಲುಗಾಡದೆ ಮೇಲೆತ್ತಿದ ಕೈ ಊರ್ಧ್ವಮುಖವಾಗಿ ಸ್ತಂಭನಗೊಂಡಾಗ ಅನ್ಯ ಮಾರ್ಗವಿಲ್ಲದೆ ಅದೇ ಸ್ಥಿತಿಯಲ್ಲಿ ಶ್ರೀ ಹರಿಯನ್ನು ದೇವರಾಜ ಇಂದ್ರ ಸ್ತುತಿಸಿದ. ಸರ್ವರನ್ನು ಪಾಲಿಸುವ ಶ್ರೀಮನ್ನಾರಾಯಣ ಇಂದ್ರನ ಮೊರೆ ಆಲಿಸಿ ಬಂದಾಗ ಘಟಿಸಿದ ವಿದ್ಯಮಾನಗಳು ತಿಳಿಯಿತು. ಸ್ಥಂಭನೆಗೊಂಡಿರುವ ಇಂದ್ರನ ಕೈಯನ್ನು ಶ್ರೀಹರಿ ನೇವರಿಸಿದಾಗ ಪುನರಪಿ ಚಲನೆ ಹೊಂದಿ ಮೊದಲಿನಂತಾಯಿತು. ತದನಂತರ ಋಷಿ ಪತ್ನಿ ಖ್ಯಾತಿಯಲ್ಲಿ ಪರಿ ಪರಿಯಾಗಿ ರಕ್ಕಸನನ್ನು ಬಿಟ್ಟು ಕೊಡಲು ನಾರಾಯಣನು ಕೇಳಿಕೊಳ್ಳುತ್ತಾನೆ. ಜಗತ್ತಿನ ಪಾಲನೆ ಮಾಡುವಲ್ಲಿ ನನ್ನ ಕರ್ತವ್ಯವೆಸಗಲು ಅವಕಾಶ ಮಾಡಿಕೊಡು ಎಂದು ವಿನಮ್ರತೆಯಿಂದ ನಿವೇದಿಸಿಕೊಳ್ಳುತ್ತಾನೆ. ಇದ್ಯಾವುದಕ್ಕೂ ಜಗ್ಗದೆ ಪ್ರತಿಯಾಡಿದ ಭೃಗುವಲ್ಲಭೆ ನಮ್ಮ ಆಶ್ರಮದಲ್ಲಿ ರಕ್ಷಿತನಾಗಿರುವವನ್ನು ಬಿಟ್ಟು ಕೊಡಲಾಗದು ಎಂದು ನಿರಾಕರಿಸುತ್ತಾಳೆ. ಆಗ ಅನ್ಯ ಮಾರ್ಗವಿಲ್ಲದೆ ಖ್ಯಾತಿದೇವಿ ಶ್ರೀಹರಿ ಸುದರ್ಶನ ಚಕ್ರದಿಂದ ಬಲಿಯಾಗುವಂತಾಯಿತು.
ಆಶ್ರಮಕ್ಕೆ ಮರಳಿ ಬಂದ ಭೃಗು ಮಹರ್ಷಿ ಸತಿಯನ್ನು ಕಾಣದೆ ಹುಡುಕಿದರು. ಆಕೆಯ ಪಾರ್ಥಿವ ಶರೀರ ರುಂಡ ಮುಂಡ ಪ್ರತ್ಯೇಕವಾಗಿ ಧರೆಗುರುಳಿದ ಸ್ಥಿತಿಯಲ್ಲಿದೆ. ಈ ರೀತಿ ತನ್ನ ಧರ್ಮ ಪತ್ನಿಯ ಹತ್ಯೆಗೈದವರು ಯಾರೆಂದು ಜ್ಞಾನ ದೃಷ್ಟಿಯಿಂದ ನೋಡಿದರು. ವಿಷಯ ಅರಿತು ಹರಿಯ ಬಗ್ಗೆ ಅತ್ಯುಗ್ರ ಕೋಪ ತಾಳಿದರು. ಭೃಗು ಕೋಪ ಭಗವಾನ್ ವಿಷ್ಣುವಿಗೆ ಶಾಪವಾಗಿ ಪರಿವರ್ತನೆಗೊಂಡಿತು. “ಹತ್ತು ಜನ್ಮದಲ್ಲಿ ಭೂಮಿಯಲ್ಲಿ ಹುಟ್ಟುವಂತವನಾಗು. ಅದರಲ್ಲೂ ಒಂದು ಜನುಮದಲ್ಲಿ ಪತ್ನಿ ವಿಯೋಗ ಅನುಭವಿಸಿ ನನ್ನ ವೇದನೆ ಏನೆಂದು ಅನುಭವಿಸು” ಎಂದು ಶ್ರೀಮನ್ನಾರಾಯಣನನ್ನೇ ಶಪಿಸಿದರು.
ಯಾರನ್ನಾದರು ಶಪಿಸಿದರೆ ಅಥವಾ ಅನುಗ್ರಹಿಸಿದರೆ ಹೊಂದಿದ ಪುಣ್ಯಬಲ ವಿನಿಯೋಗವಾಗುತ್ತದೆ. ಈಗ ತ್ರಿಮೂರ್ತಿಗಳಿಗೂ ಶಪಿಸಿದ ಭೃಗು ಮಹರ್ಷಿ ಪುಣ್ಯವನ್ನು ಕಳಕೊಂಡಿದ್ದಾರೆ ಅಥವಾ ಪುಣ್ಯಶೂನ್ಯರಾಗಿದ್ದಾರೆ ಎಮ್ನಬಹುದು. ಮತ್ತೆ ಅಂತಹ ದಿವ್ಯ ಬಲ ಸಂಚಯಕ್ಕಾಗಿ ತಪೋ ಮುಖರಾಗಿ ವಿಷ್ಣುವನ್ನು ಕುರಿತಾಗಿ ಸುದೀರ್ಘ ಕಾಲ ಘೋರ ತಪಸ್ಸನ್ನಾಚರಿಸಿ ಒಲಿಸಿಕೊಂಡರು. ಪ್ರಸನ್ನನಾಗಿ ಪ್ರಕಟನಾದ ಶ್ರೀಹರಿಯಲ್ಲಿ ತಾನಿತ್ತ ಶಾಪವನ್ನು ಮುನಿ ವಚನ ಹುಸಿಯಾಗದಂತೆ ನಿಜವಾಗಿಸಲು ಬೇಡಿಕೊಳ್ಳುತ್ತಾರೆ. ದುರುಳರ ವಧೆ – ಇಳೆಯ ಭಾರ ಇಳಿಸುವ ಕೈಂಕರ್ಯಕ್ಕೆ ಈ ಶಾಪ ಅನುಕೂಲವಾಯಿತು ಎಂದು ನುಡಿದ ಹರಿ ಶಾಪ ವಾಕ್ಯ ಸ್ವೀಕರಿಸಿ ಅಂತೆಯೇ ಆಚರಿಸುವ ಅಭಯವನ್ನು ದಯಪಾಲಿಸುತ್ತಾನೆ.