
ಇಂದಿಗೂ ಅನೇಕರಿಗೆ ಸಂಜೆಯ ಸಮಯದಲ್ಲಿ ನಿದ್ರಿಸಬಾರದು ಎಂಬುದಕ್ಕೆ ಸ್ಪಷ್ಟ ಕಾರಣ ತಿಳಿದಿಲ್ಲ. ಹಿರಿಯರು “ಸಂಜೆ ಲಕ್ಷ್ಮಿ ಬರುವ ಹೊತ್ತು” ಎಂದು ಹೇಳಿ ಸುಮ್ಮನಾಗಿಬಿಡುತ್ತಿದ್ದರು. ಆದರೆ, ಈ ನಂಬಿಕೆಯ ಹಿಂದೆ ಆಧ್ಯಾತ್ಮಿಕ ಹಾಗೂ ಪ್ರಾಯೋಗಿಕ ಕಾರಣಗಳೂ ಇವೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವ
ಹಿಂದೂ ಸಂಪ್ರದಾಯದ ಪ್ರಕಾರ, ಮುಂಜಾನೆ ಮತ್ತು ಸಂಧ್ಯಾಕಾಲವು ಅತ್ಯಂತ ಪವಿತ್ರವಾದ ಸಮಯ. ಈ ಅವಧಿಯಲ್ಲಿ ದೇವಾನುದೇವತೆಗಳು ಪರಸ್ಪರ ಭೇಟಿಯಾಗಿ ಮನೆಗಳಿಗೆ ಬಂದು ಸದಸ್ಯರನ್ನು ಆಶೀರ್ವದಿಸುತ್ತಾರೆ ಎಂಬ ನಂಬಿಕೆಯಿದೆ. ಅಂತಹ ಶುಭ ಸಮಯದಲ್ಲಿ ನಾವು ಆಶೀರ್ವಾದ ಪಡೆಯಲು ಸಿದ್ಧರಾಗಿರಬೇಕು. ಆದ್ದರಿಂದ, ನಿದ್ರಿಸುವುದು ಸೂಕ್ತವಲ್ಲ ಎಂದು ಹೇಳಲಾಗುತ್ತದೆ.
ಸಂಜೆ 5:30 ರಿಂದ 7:00 ಗಂಟೆಯ ಅವಧಿಯನ್ನು ಸಂಧ್ಯಾ ಕಾಲ ಎಂದು ಪರಿಗಣಿಸಲಾಗುತ್ತದೆ. ಇದು ದಿನ ಮತ್ತು ರಾತ್ರಿಯ ನಡುವೆ ಶಕ್ತಿಯ ಬದಲಾವಣೆಯ ಸಂಕ್ರಮಣ ಕಾಲ. ಈ ಸಮಯದಲ್ಲಿ ದೀಪಗಳನ್ನು ಹಚ್ಚುವುದು ಅಂಧಕಾರದ ವಿರುದ್ಧ ಬೆಳಕಿನ ಸಂಕೇತ. ಇದು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ, ಕುಟುಂಬದಲ್ಲಿ ನೆಮ್ಮದಿಯನ್ನು ತರುತ್ತದೆ ಎಂದು ನಂಬಲಾಗಿದೆ. ಈ ಪವಿತ್ರ ಸಮಯದಲ್ಲಿ ನಿದ್ರಿಸುವುದು ಅಲಸ್ಯ, ಅಜ್ಞಾನ ಮತ್ತು ಧರ್ಮದಿಂದ ವಿಮುಖವಾಗುವುದರ ಸಂಕೇತ ಎಂದು ಶಾಸ್ತ್ರಗಳು ಹೇಳುತ್ತವೆ.
ದುರ್ಗಾ, ಲಕ್ಷ್ಮಿ, ಸರಸ್ವತಿ ದೇವತೆಗಳು ಸಂಜೆಯ ಹೊತ್ತಿನಲ್ಲಿ ಮನೆಯೊಳಗೆ ಪ್ರವೇಶಿಸಿ ಆಶೀರ್ವಾದ ಮಾಡುತ್ತಾರೆ ಎಂಬ ಪ್ರತೀತಿಯೂ ಇದೆ. ಹಾಗಾಗಿ, ಈ ಸಮಯದಲ್ಲಿ ಮಕ್ಕಳು ಓದಿನತ್ತ ಗಮನ ಹರಿಸಬೇಕು. ಹಿರಿಯರು ಮಂತ್ರ ಪಠಿಸುವುದು, ಭಕ್ತಿಗೀತೆಗಳನ್ನು ಕೇಳುವುದು, ಅಥವಾ ದೇವರ ಪೂಜೆ ಮಾಡುವುದರಲ್ಲಿ ನಿರತರಾಗಬೇಕು. ಹೀಗೆ ಮಾಡುವುದರಿಂದ ದೇವತೆಗಳ ಆಶೀರ್ವಾದ ಲಭಿಸಿ ಸಕಲ ಸಮೃದ್ಧಿ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.
ಪ್ರಾಯೋಗಿಕ ಮತ್ತು ಆರೋಗ್ಯ ಸಂಬಂಧಿ ಕಾರಣಗಳು
ಸಂಜೆಯ ಹೊತ್ತಿನಲ್ಲಿ ನಿದ್ರಿಸುವುದರಿಂದ ನಮ್ಮ ದೇಹದ ಸಂಪೂರ್ಣ ವಿಶ್ರಾಂತಿ ಆಗುವುದಿಲ್ಲ. ಇದು ಸಂಜೆಯಿಂದ ರಾತ್ರಿಯವರೆಗೆ ಯಾವುದೇ ಕೆಲಸ ಮಾಡಲು ಮನಸ್ಸು ಬರುವುದಿಲ್ಲ. ದೇಹದಲ್ಲಿ ಆಯಾಸ ಹೆಚ್ಚಾಗಿ, ರಾತ್ರಿಯ ನಿದ್ರೆಗೂ ತೊಂದರೆಯಾಗುತ್ತದೆ. ಉತ್ತಮ ನಿದ್ರೆಗಾಗಿ, ಸಂಜೆಯ ವೇಳೆ ನಿದ್ರೆ ಮಾಡುವುದನ್ನು ತಪ್ಪಿಸುವುದು ಉತ್ತಮ.
ಸಂಧ್ಯಾಕಾಲದಲ್ಲಿ ಮಾಡಬೇಕಾದ್ದು:
- ದೀಪ ಹಚ್ಚಿ ಪ್ರಾರ್ಥನೆ ಮಾಡುವುದು.
- ಶ್ಲೋಕ ಪಠಣ ಅಥವಾ ಮಂತ್ರೋಚ್ಚಾರ ಮಾಡುವುದು.
- ಶಾಂತವಾಗಿ ಧ್ಯಾನದಲ್ಲಿ ಕುಳಿತುಕೊಳ್ಳುವುದು.
ಈ ಚಟುವಟಿಕೆಗಳು ಮನಸ್ಸಿಗೆ ಶಾಂತಿಯನ್ನು ನೀಡಿ, ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ.