
ಅಶೋಚ್ಯಾನನ್ವಶೋಚಸ್ತ್ವಂ ಪ್ರಜ್ಞಾವಾದಾಂಶ್ಚ ಭಾಷಸೇ|(2-11) ಶ್ರೀಕೃಷ್ಣ ದುಃಖ ಪಡಬಾರದೆಂದವನಲ್ಲ. ದುಃಖಪಡಬಾರದ್ದಕ್ಕೆ ದುಃಖ ಪಡಬಾರದು- ಇದು ಶ್ರೀಕೃಷ್ಣನ ಮೊತ್ತ ಮೊದಲ ಉದ್ಗಾರ. ದುಃಖಪಡಬೇಕಾದ್ದಕ್ಕೆ ದುಃಖಪಡಬೇಕು. ಎಲ್ಲಿ ಬೇರೆಯವರಿಗೆ ಕಷ್ಟವಾಗುತ್ತದೋ ಅಲ್ಲಿ ದುಃಖ ಪಡಬೇಕು.
“ಪ್ರಜ್ಞಾವಾದಾಂತ’ ಎಂದು ಹೇಳುವ ಬದಲು ಬಹುವಚನ (ಪ್ರಜ್ಞಾವಾದಾಂಶ್ಚ) ಹೇಳಿದ್ದೇಕೆ? ಅರ್ಜುನನ ಪ್ರತಿವಾದಕ್ಕೂ ವಿರುದ್ಧಾರ್ಥಗಳಿವೆ. ಅನೇಕ ವಾದಗಳಿವೆ. ಸ್ಥಿರವಾದಗಳಿಲ್ಲ. ಹಿಂದಿನ ಮಾತಿಗೂ ಮುಂದಿನ ಮಾತಿಗೂ ಸಂಬಂಧವಿಲ್ಲ. ಪ್ರಜ್ಞಾ =ತಿಳಿದುಕೊಂಡವ. ಆದರೆ ವಾಸ್ತವದಲ್ಲಿ ಅರ್ಜುನ ಹಾಗಿಲ್ಲ. “ತುಂಬ ತಿಳಿದುಕೊಂಡವರ ಹಾಗೆ’ ಅರ್ಜುನನಿದ್ದ. ವಾದವನ್ನು ಮಾಡು ಎಂದು ಹೇಳುವುದೇ ವಿನಾ ವಾದವನ್ನು ಹೇಳು ಎಂದು ಹೇಳುವುದಿಲ್ಲ. ನೀನು ಭಾಷಣ ಮಾಡುತ್ತಿದ್ದೀ (ಭಾಷಸೇ) ಎನ್ನುತ್ತಾನೆ.
ಭಾಷಣವೆಂದರೆ ಇನ್ನೊಬ್ಬರಿಗೆ ಮರಳಾಗುವಂತೆ ಮಾತನಾಡುವುದು. ನಿಜವಾಗಿ ಅಲ್ಲಿ ಶಕ್ತಿ ಇಲ್ಲ. ಪ್ರಜ್ಞಾವಾದವೆಂದರೆ ಮನಸ್ಸಿಗೆ ಬಂದಂತೆ ಮಾತನಾಡುವುದು ಎಂಬರ್ಥವೂ ಇದೆ. ಮನುಷ್ಯನ ದೋಷ ತನಗೆ ತೋರಿದ್ದೇ ಪರಮಪ್ರಮಾಣ ಎಂದು ತಿಳಿಯುವುದು. ನನ್ನ ಮನಸ್ಸಿಗೆ ಬಂದದ್ದೇ ಸರಿ ಎಂದು ತಿಳಿದರೆ ಸತ್ಯ ಕಾಣುವುದಿಲ್ಲ. ಮೋಹಕ್ಕೆ ಒಳಗಾಗುವುದು ಸಹಜ, ಅದರಿಂದ ಹೊರಬರುವುದೂ ಅಗತ್ಯ.